ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಕುಂಭಮೇಳ: ಮಿಂದವರ ಲೆಕ್ಕಹಾಕಿದ ಉಪಗ್ರಹ..!

ಕುಂಭಮೇಳ: ಮಿಂದವರ ಲೆಕ್ಕಹಾಕಿದ ಉಪಗ್ರಹ..!

Sun, 02 May 2010 03:21:00  Office Staff   S.O. News Service

ಡೆಹ್ರಾಡೂನ್ (ಪಿಟಿಐ): ಕುಂಭಮೇಳದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಏಪ್ರಿಲ್ 14ರಂದು ಕುಂಭ ಮೇಳದ ಸಂದರ್ಭದಲ್ಲಿ ಹರಿದ್ವಾರದಲ್ಲಿ ಗಂಗಾನದಿಯಲ್ಲಿ ಮಿಂದ 1.66 ಕೋಟಿ ಭಕ್ತರ ಸಂಖ್ಯೆಯನ್ನು ಖರಾರುವಾಕ್ಕಾಗಿ ಲೆಕ್ಕ ಹಾಕಲು ವಿಜ್ಞಾನಿಗಳು ಉಪಗ್ರಹ ಮಾಹಿತಿಯ ನೆರವು ಪಡೆದಿದ್ದಾರೆ.

ಉತ್ತರಾಖಂಡ ಮುಖ್ಯಮಂತ್ರಿ ರಮೇಶ ಪೋಖರಿಯಾಲ್ ನಿಶಾಂಕ್ ಅವರ ಮನವಿ ಮೇರೆಗೆ ಇಸ್ರೊ ಮತ್ತು ರಾಜ್ಯ ಬಾಹ್ಯಾಕಾಶ ಕೇಂದ್ರದ 12 ಮಂದಿ ವಿಜ್ಞಾನಿಗಳ ತಂಡವು ಕುಂಭ ಮೇಳದ ದಿನ ಮಿಂದ ಭಕ್ತರ ಲೆಕ್ಕ ಹಾಕಲು ಉಪಗ್ರಹದ ನೆರವು ಪಡೆಯಿತು ಎಂದು ಶನಿವಾರ ಇಲ್ಲಿ ಬಿಡುಗಡೆ ಮಾಡಲಾದ ಅಧಿಕೃತ ಹೇಳಿಕೆ ತಿಳಿಸಿದೆ.

ವಿಜ್ಞಾನಿಗಳು ಭಾರೀ ಪ್ರಮಾಣದ ಯಾತ್ರಾರ್ಥಿಗಳ ನಿರ್ವಹಣೆಯನ್ನು ಹಾಗೂ ಮೂಲ ಸವಲತ್ತು ವ್ಯವಸ್ಥೆಯನ್ನೂ ವರದಿ ರೂಪದಲ್ಲಿ ದಾಖಲಿಸಿದ್ದು ಇದು ಭವಿಷ್ಯದಲ್ಲಿ ಕುಂಭ ಮೇಳಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಮತ್ತು ಇಂತಹ ಬೃಹತ್ ಜನ ಸಂದಣಿಗಳನ್ನು ನಿಭಾಯಿಸಲು ಅನುಕೂಲಕರವಾಗಲಿದೆ ಎಂದು ಅದು ತಿಳಿಸಿದೆ.

ವರದಿಯ ಪ್ರಕಾರ ಕುಂಭಮೇಳದ ನಾಲ್ಕನೆಯ ಹಾಗೂ ಅಂತಿಮ ದಿನವಾದ 2010ರ ಏಪ್ರಿಲ್ 14ರಂದು 'ಮಹಾಕುಂಭ' ಸ್ನಾನ ಸಂದರ್ಭದಲ್ಲಿ 1.66 ಕೋಟಿ ಭಕ್ತರು ನದಿಯಲ್ಲಿ ಸ್ನಾನ ಮಾಡಿದರು.

ಏಪ್ರಿಲ್ 30ರಂದು ಮುಕ್ತಾಯವಾದ ಮೂರೂವರೆ ತಿಂಗಳ ಮಹಾಕುಂಭ ಮೇಳದ ಅವಧಿಯಲ್ಲಿ 5 ಕೋಟಿಗೂ ಹೆಚ್ಚು ಭಕ್ತರು ನದಿಯಲ್ಲಿ ಸ್ನಾನ ಮಾಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.


Share: